ಎಣ್ಮೂರಿನ ದೇವ ಬಲ್ಲಾಳನು ಧರ್ಮವಂತನಾಗಿದ್ದನು. ಆತನು ಅಧರ್ಮ, ದಾರಿದ್ರ್ಯ, ಅಂತಃ ಕಲಹ ಮುಂತಾದುದಕ್ಕೆ ಎಡೆ ಕೊಡದೆ ರಾಜ್ಯವನ್ನು ನ್ಯಾಯ ಪರಿಪಾಲನೆಯಲ್ಲಿ ಪಾಲಿಸುತ್ತಿದ್ದನು. ಇದರಿಂದ ಇಕ್ಕೇರಿ ಅರಸರು ಈ ಕಡೆಗೆ ಬೇಟಿ ಕೊಟ್ಟಾಗ ಕೊಂಡಾಡಿದ್ದಲ್ಲದೆ, ಇತರ ಬೀಡಿನ ಅರಸರಲ್ಲಿಯೂ ದೇವ ಬಲ್ಲಾಳನ ಆಡಳಿತ ಪದ್ದತಿಯನ್ನು ಹೊಗಳುತ್ತಿದ್ದರು. ಇದರಿಂದ ಎಲ್ಲಾ ಬಲ್ಲಾಳರೂ ದೇವ ಬಲ್ಲಾಳರನ್ನು ವಕ್ರ ದೃಷ್ಟಿಯಲ್ಲಿ ನೋಡ ತೊಡಗಿದರು. ಪಂಜದ ಬಲ್ಲಾಳನಂತು ಎಲ್ಲರಿಗಿಂತ ಮಿಗಿಲಾಗಿ ನಂಜು ಕಾರಲು ಪ್ರಾರಂಭಿಸಿದ. ಗಡಿಕಲ್ಲು ಬದಲಾಯಿಸಿ ಎಣ್ಮೂರಿನ ಕೆಲವು ಭಾಗಗಳನ್ನು ಕಿತ್ತು ಕೊಂಡಿದ್ದ. ಬಲಾಢ್ಯರಾದ ಕೋಟಿ ಚೆನ್ನಯರಿಗೆ ಆಶ್ರಯ ಕೊಟ್ಟರೆ ತನ್ನ ವಶವಾದ ಪ್ರದೇಶಗಳನ್ನು ಪುನಃ ಪಡೆದುಕೊಳ್ಳಬಹುದೆಂದು ಬಗೆದ.