ಗೌರಿ ಹೊಳೆಯ ಬದಿಯಿಂದಲೇ ಬಂದ ವೀರರು ಬಲಕ್ಕೆ ತಿರುಗಿದ ದಾರಿಯಿಂದ ಸುಮಾರು ಇಪ್ಪತ್ತು ಮಾರು ಹೋಗಿದ್ದರು. ಎದುರಿಂದ ಹೆಂಗಸೊಬ್ಬಳು ಬರುವುದು ಕಾಣಿಸಿತು. ಎದುರಿಗೆ ಬಂದವಳು ತನ್ನ ತಲೆ ಹೊರೆಯನ್ನು ನೆಲಕ್ಕಿಳಿಸಿ, ಮಕ್ಕಳೇ ನೀವು ಯಾರು? ಎಂದು ಪ್ರಶ್ನಿಸಿದಳು ನಾವು ಪಡುಮಲೆಯಿಂದ ಬಂದಿದ್ದೇವೆ. ನೇರೆಂಕಿ ಮಾಗಣೆಯ ಕಲ್ಲೆಂಬಿದೋಳದ ಅಕ್ಕನ ಮನೆಗೆ ಹೋಗುತ್ತಿದ್ದೇವೆ ಅಂದಾಗ ಕಾಂತಕ್ಕ ಮಕ್ಕಳೇ ಈ ದಾರಿ ಬಹಳ ಅಪಾಯದ್ದು. ಇದು ಮೂರು ರಾಜ್ಯದ ಗಡಿ ಪ್ರದೇಶ. ಇಲ್ಲಿ ಪಂಜದ ಬಲ್ಲಾಳನ ಗಡಿ ಕಾವಲಿನವರು ಕಾಯುತ್ತಿದ್ದಾರೆ. ಅಲಂದ ಅಡಕೆ=ಓಡಿಹೋಗತಂತೆ ತಡೆ ನೆಲದಲ್ಲಿ ನೆಲ ಉರುಳು=ನೆಲದಲ್ಲಿ ಹಾಕಿದ ಬಲೆ, ಮರಟ್ ಮರ ಒಲಿ=ಮರದ ಮೇಲೆ ಅಡಗಿ ಕಾಯಿವುದು. ಕಲ್ಲ್ಡ್ ಕಲ್ಲವೊಲಿ=ಪಾದೆ ಕಲ್ಲಿನ ಮರೆಯಲಿ ಕಾಯುವುದು, ಕೊಪ್ಪದ ಕೊರಗರು, ಓಣಿಯ ಮೋಗೇರರು, ಬೈಲ ಬಾಕುಡರು ರಾತ್ರಿ ಹಗಲು ಕಾಯುತ್ತಿದ್ದಾರೆ. ಕೈಗೆ ಸಿಕ್ಕಿದವರನ್ನು ಯಾರು? …..ಏನು..? ವಿಚಾರಿಸದೇ ಹೊಡೆದು ಬಡಿದು ಕಳುಹಿಸುವುದು ಇವರ ಪದ್ದತಿ ಎಂದವಳು ಬಂಟರನ್ನೆ ನೋಡಿ ಮಕ್ಕಳೆ ಈ ಗುಡ್ಡ ಹತ್ತಿ ಹೋಗುವ ನೇರ ದಾರಿಯಿಂದ ಹೋದರೆ ಅವರ ಕಾಟ ತಪ್ಪಬಹುದು. ಎಡಕ್ಕೆ ತಿರುಗಿ ಓಣಿ ಪ್ರದೇಶದಲ್ಲಿ ಮಾತ್ರ ಅಪಾಯ ಖಂಡಿತ ಎಂದಾಗ ಕೋಟಿ ಕೂಡಲೇ ಆಗಬಹುದು ಎಂದವನು ಕೋಟಿ ಮುಂದೆ ನಡೆದಾಗ ಚೆನ್ನಯ ಹಿಂಬಾಲಿಸಿದ. ಕಾಂತಕ್ಕ ತಲೆ ಹೊರೆ ಹೊತ್ತು ಅವಳದಾರಿ ಹಿಡಿದಳು. ಬಂಟರು ಅಪಾಯದ ದಾರಿಯೇ ಹಿಡಿದು ಓಣಿ ಪ್ರದೇಶ ಮುಟ್ಟಿದಾಗ….. ಅಲ್ಲೇ ನಿಲ್ಲಿ ಎಂಬ ಮಾತು ಕೇಳಿಸಿತು. ನೋಡಿದಾಗ ನಾಲ್ಕು ಕಡೆಗಳಿಂದಲೂ ಕತ್ತಿ ದೊಣ್ಣೆ ಹಿಡಿದ ಕಾವಲುಗಾರಾರು ಓಡಿ ಬರುವುದು ಕಂಡಿತು. ಚೆನ್ನಯ ಕೂಡಲೇ ಕತ್ತಿ ಹಿಡಿದು ಮೂರು ಸುತ್ತು ಬೀಸಿದಾಗ ನೆಲ್ಲಿ ಮರದ ಗೆಲ್ಲುಗಳು ತುಂಡು ತುಂಡಾಗಿ ಬಿದ್ದವು. ಇದನ್ನು ನೋಡಿದ ಕವಲುಗಾರರು ಭಯದಿಂದ ಅಲ್ಲೇ ನಿಂತುಬಿಟ್ಟರು. ಈ ಅಪೂರ್ವ ಸಹೋದರ ಬಂಟರನ್ನು ಕಂಡು ಭಯದಿಂದ ಕಾರ್ಯಚರಣೆ ಮಾಡುವುದನ್ನು ಬಿಟ್ಟು ತಪ್ಪಾಯಿತೆಂದು ಕ್ಷಮೆ ಬೇಡಿದರು. ಮುಂದೆ ಬಂದ ಕೋಟಿ ಶರಣಾದವರನ್ನು ಕ್ಷಮಿಸಿ – ನಿಮ್ಮ ಪುಂಡಾಟಿಕೆ ನಮಗೆ ಗೊತ್ತು. ಇನ್ನೂ ಯಾವತ್ತು ಹೀಗೆ ಮಾಡಬೇಡಿ ಎಂದು ಬುದ್ಧಿ ಹೇಳಿದನು. ಮುಂದೆ ಅವರಿಂದಲೆ ಕಲ್ಲೆಂಬಿ ದೋಳದ ದಾರಿ ಕೇಳಿ ಬೆಳ್ಳಾರೆಗೆ ಹೋಗುವ ಮಾರ್ಗಬಿಟ್ಟು ಬಡಗುದಿಕ್ಕಿರುವ ದಾರಿಹಿಡಿದು ನಡೆದರು.

ಕೋಟಿ ಚೆನ್ನಯರು ಕೂಟಾಜೆಯಲ್ಲಿ ಬಾಯಾರಿಕೆ ತಣಿಸಲು ಸುರಿಯ ಬಳಸಿ ಬಂಡೆಕಲ್ಲು ತೆಗೆದು ಮಾಡಿದ ಕೊಳ

ಟಿಪ್ಪಣಿ: ಧರ್ಮಡ್ಕ ಅರವಟ್ಟಿಗೆ ಕಟ್ಟೆ ಬೊಳಿಯೂರು ಗ್ರಾಮದಲ್ಲಿದೆ. ಈ ಭಾಗದ ಪಶ್ಚಿಮಕ್ಕೆ ಆಮೈ ಗ್ರಾಮ, ಇಂಗ್ಲೀಷರ ಕಾಲದಲ್ಲಿ ಈ ಗ್ರಾಮಗಳನ್ನು ಸೇರಿಸಿ ಕಲ್ಮಡ್ಕ ಗ್ರಾಮವೆಂದು ಹೆಸರಿಸಿದ್ದಾರೆ. ಧರ್ಮಡ್ಕದಲ್ಲಿ ಕಲಿಯುವ ಶಾಲೆಯಿದ್ದುದನ್ನು ಈಗ ಇರುವ ಕಲ್ಮಡ್ಕ ಶಾಲೆಯ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಕಲಿಯುವ ಅಡ್ಕ ಕಲ್ಮಡ್ಕ ವಾಗಿರಬಹುದೆಂದು ಊಹಿಸಬಹುದಾಗಿದೆ. ಕಲ್ಮಡ್ಕದಿಂದ ನಿಂತಿಕಲ್ಲಿನ ತನಕ ಹೋದಾಗ ಕಂಡುಬರುವ ವಿಷಯಗಳನ್ನು ಮತ್ತು ಭೇಟಿಯಾಗುವ ಬಾರಗರ ಹೆಂಗಸು, ಕಾವಲುಗಾರರ ದುಡುಕು ಸ್ವಾಭಾವ, ನಿಂತಿಕಲ್ಲಿನಲ್ಲಿ ಉಲ್ಲಾಕುಳು ಕಲ್ಲುಗಳಿಗೆ ದೀಪಾರಾಧನೆ ಮಾಡುವ ಗೌಡರ ಕುರಿತು ಮೊದಲೆ ಹೇಳಿದ್ದರು. ಅವರು ಹೇಳಿದಂತೆ ಕಂಡು ಬರದಿದ್ದರೆ ನಾನು ಹೇಳಿದ ಭವಿಷ್ಯ ಸುಳ್ಳೆಂದು ಗ್ರಹಿಸಿರಿ ಎಂದೂ ಹೇಳಿದ್ದು ನಿಜವಾಯಿತು. ಇದು ಪಾಡ್ದನದಲ್ಲಿಯೂ ಇದೆ. ಕಾಯೆರುಮಾರು, ಮಾರು=ಗದ್ದೆ, ಕಾಯೆರು ಮರ ವಿರುವ ಮಾರು ಸ್ಥಳ, ಪಂಜ ಬೆಳ್ಳಾರೆ ಮತ್ತು ಎಣ್ಮೂರು ಬಲ್ಲಾಳರ ಗಡಿಪ್ರದೇಶ. ಆಗ ಈಗಿನ ಹಾಗೆ ಸವರ್ೆಕಲ್ಲೂಗಳು ಇರಲಿಲ್ಲ. ಬೌತಿಕ ವಸ್ತುಗಳನ್ನೇ ಗಡಿಯಾಗಿ ಗುರುತಿಸಿದ್ದರು. ಇಲ್ಲಿ ಕಾಸರಕನ (ಕಾಯರು) ಮರವನ್ನೆ ಗಡಿಯಾಗಿ ಸೊಚಿಸಿದ್ದರಿಂದ ಕಾಯರ್ ಮಾರ್ ಎಂಬ ಹೆಸರು ಬಂತೆಂದು ತಿಳಿಯಬಹುದು. ನಿಂತಿಕಲ್ಲಿನಲ್ಲಿ ಸಿಗುವ ಗೌಡರಿಂದ ಮುಂದಿನ ದಾರಿ ತಿಳಿದು ಹೋಗುವಂತೆ ಭಟ್ಟರು ಸಲಹೆ ಕೊಟ್ಟಿದ್ದರಂತೆ.