ಪಂಜ ಮಾಗಣೆಯ 21 ಗ್ರಾಮಗಳ ಪೈಕಿ ಬೊಳಿಯೂರು ಒಂದು ಗ್ರಾಮ. ಈ ಗ್ರಾಮ ಪಂಜ ಬಲ್ಲಾಳರ ಆಡಳಿತ ಪ್ರದೇಶ. ಬೊಳಿಯೂರುನಲ್ಲಿ ವಿಶಾಲವಾದ ಒಂದು ಅಡ್ಕ. ಚೊಕ್ಕಾಡಿಯಿಂದ ಬಂದ ದಾರಿ ಇಲ್ಲಿ ಕವಲೊಡೆದು, ಒಂದು ದಾರಿ ಪೂರ್ವಭಿಮುಖವಾಗಿ ಪಂಜ ಬೀಡಿಗೆ ಹೋಗುತ್ತಿತ್ತು. ಧರ್ಮಡ್ಕದಿಂದ ಪಂಜ ಬೀಡಿನ ತನಕ ಇದ್ದ ದಾರಿ ವಿಶಾಲವಾಗಿದ್ದಂತೆ ಕಂಡುಬರುತ್ತಿತ್ತು. ಅಲ್ಲಲ್ಲಿ ಮಾರ್ಗದ ಕುರುವು ಈಗಲೂ ಕಂಡು ಬರುತ್ತದೆ. ಧರ್ಮಡ್ಕದಿಂದ ಪಶ್ಛಿಮದ ಕಡೆಗೆ ಹೊರಟ ದಾರಿ ಬೊಮ್ಮೆಟಿ ಎಂಬ ಬೈಲನ್ನು ದಾಟಿದೊಡನೆ ಎದುರಾಗುವ ಗೌರಿಹೊಳೆಯ ದಡದಲ್ಲಿ ಸುಮಾರು ಒಂದು ಕಿಲೋ ಮೀಟರ್ ಸಾಗಿದಾಗ ಕಾಯೆರುಮಾರು ಪ್ರದೇಶ. ಈ ಪ್ರದೇಶ ಬೆಳ್ಳಾರೆ, ಎಣ್ಮೂರು, ಮತ್ತು ಪಂಜ ಬಲ್ಲಾಳರ ಗಡಿ ಪ್ರದೇಶ, ಇಲ್ಲಿ ಪುನಃ ದಾರಿ ಕವಲೊಡೆದು ಒಂದು ದಾರಿ ಪಶ್ಚಿಮಕ್ಕೆ ಸಾಗಿ ಬೆಳ್ಳಾರೆಗೆ ಹೋಗುತ್ತಿದ್ದರೆ, ಇನ್ನೊಂದು ಉತ್ತರಕ್ಕೆ ಹೋಗಿದ್ದು ನೇರೆಂಕಿಗೆ ಹೋಗುವ ದಾರಿಯಾಗಿತ್ತು.