ಕೋಟಿ ಚೆನ್ನಯರು ಪಡುಮಲೆಯಿಂದ ಹೊರಟವರು ಯಾವ ದಾರಿಯಿಂದ ಪಂಜಕ್ಕೆ ಬಂದರೆಂದು ಮಾಹಿತಿ ದೊರೆತಿಲ್ಲ. ಪೆರ್ಲಂಪಾಡಿಯಲ್ಲಿ ಬಂದು ವಿಶ್ರಮಿಸಿದ ವಿವರ ದೊರೆತಿದೆ. ಇಲ್ಲಿ ಒಂದು ಮೈದಾನ, ಮೈದಾನದಲ್ಲಿ ಒಂದು ಅರಳಿ ಮರ, ಅರಳಿ ಮರದಡಿಯಲ್ಲಿ ಒಂದು ಪಾದೆಕಲ್ಲು. ಕೋಟಿ ಚೆನ್ನಯರು ಪಂಜದ ಕಡೆಗೆ ಬರುತ್ತಿದ್ದರು, ಇಲ್ಲಿಗೆ ಬಂದು ಈ ಪಾದೆಕಲ್ಲಿನಲ್ಲಿ ಕುಳಿತಿದ್ದರೆಂದು ಸುದ್ದಿ. ಈ ಕುರಿತಾಗಿ ಕ್ಷೇತ್ರ ಅಧ್ಯಯನ ಮಾಡಿದಾಗ ಇದು ನಿಜವಾದ ಮೌಖಿಕ ಕಥೆಯೆಂದು ಕಂಡು ಬರುವುದು. ಸೂಳೆ ಪದವಿನಿಂದ ಈ ಕಡೆಗೆ ಬಂದ ದಾರಿ ಕರ್ನಪ್ಪಾಡಿ, ನಿಡ್ಪೊಳ್ಳಿ, ಪಾಪೆಜಾಲಿಗಾಗಿ ಪಡರಿಗೇರಿಗೆ ಬಂದು ಕೌಡಿಚಾರಿನಿಂದ ಪೆರ್ಲಂಪಾಡಿಗೆ ದಾರಿಯಿತ್ತೆಂದು ಹಳಬರಿಂದ ತಿಳಿದಾಗ ಕೋಟಿ ಚೆನ್ನಯರು ಬಂದಿರಬಹುದೆಂದು ಸ್ವಷ್ಟವಾಗಿ ತಿಳಿಯಬಹುದು.