ಕಾಡು ಮೃಗಗಳ ಉಪದ್ರ ನಾಡಿಗೆ ಹೆಚ್ಚಾದಾಗ ದೇವ ಬಲ್ಲಾಳರು ತುಪ್ಪೆ ಕಾಡಿನಲ್ಲಿ ಬೇಟೆಯಾಡಲು ಅಪ್ಪಣೆ ಕೊಟ್ಟರು. ಸುದ್ದಿಯು ಎಣ್ಮೂರಿನ ನಾಲ್ಕು ಕಡೆಗೂ ಹೋಯಿತು. ಊರಿನ ಬೇಟೆಯಾಳುಗಳೊಡನೆ ಕೋಟಿ ಚೆನ್ನಯರೂ ಬೀಡಿನ ಮುಂಭಾಗದ ಗದ್ದೆಯಲ್ಲಿ ಸೇರಿದರು. ಮಂಜು ಪೆರ್ಗಡೆಯೂ ಬೇಟೆಗಾಗಿ ಸೇರಿಕೊಂಡನು. ರುಕ್ಮ ಬಲ್ಲಾಳ ಬಳಿ ಕುದುರಿಯನೇರಿ ಬಿಳಿ ಸತ್ತಿಗೆಯನ್ನು. ಹಿಡಿದು ಮುಂದಾಗಿ ಹೊರಟ. ಕೋಟಿ ಚೆನ್ನಯರು ಎಡಬಲದಿಂದ ಹೊರಟರು. ಮೊದಲಾಗಿ ಕನರ್ಿ ಎಂಬ ಕಾಡಿನಲ್ಲಿ ಬೇಟೆಯಾಡಿದರು. ಬೂದು ಕಾಲಿನ ಮೊಲ ಪಚ್ಚೆಕಾಳಿನ ಜಿಂಕೆ, ಕೊಬ್ಬಿದ ಹಂದಿ, ಕುಟುರುವ ಕುದುಮುಲು ಹಕ್ಕಿ-ಯಾವುದೊಂದು ಏಳಲಿಲ್ಲ. ಮುಂದೆ ಆನೆಕಲ್ಲು ಮಲೆಯ ಹತ್ತಿರದ ತುಪ್ಪೆಕಲ್ಲು ಕಾಡಿಲ್ಲಿ ಬೇಟೆಯಾಟಿದರು. ಆಗ ಕೋಟಿಯ ಎದುರಿನಲ್ಲಿ ಆನೆಗಿಂತ ಸಣ್ಣದು, ಕುದುರೆಗಿಂತ ದೊಡ್ಡದು ಆದ ಕಾಡು ಹಂದಿ ದಾಡೆ ಮೆಸೆಯುತ್ತಾ ಬಂತು. ಅದನ್ನು ನೋಡಿದ ಕೋಟಿ ಅಂಜಿದರೂ ಕೆಮ್ಮಲೆ ನಾಗಬ್ರಹ್ಮನನ್ನು ನೆನೆದು ಕರ್ಣ ಪರಿಯಂತರ ಬಿಲ್ಲನ್ನು ಎಳೆದು ಬಾಣ ಪ್ರಯೋಗಿಸಿದನು. ಆ ಬಾಣ ಹಂದಿಯ ಎದೆಯಿಂದ ನುಗ್ಗಿ ಬೆನ್ನಿನಿಂದ ಹೊರಗೆ ಬಂತು. ಹಂದಿ ಉರುಳಿ ಬಿದ್ದತು. ಆ ಹೊತ್ತಿಗೆ ಚೆನ್ನಯನೊಡನೆ ಬೇಟೆಗಾರರು ಅಲ್ಲಿಗೆ ಬಂದು ಸೇರಿದರು. ಆ ಹೊತ್ತಿಗೆ ಎಣ್ಮೂರಿನ ಬೇಟೆಯ ಸುದ್ದಿ ತಿಳಿದ ಪಂಜದವರು ಬಂದು, ಹಂದಿ ನಮ್ಮ ಜಾಗದಲ್ಲಿ ಬಿದ್ದಿದೆ. ಆದುದರಿಂದ ಹಂದಿ ನಮಗೆ ಸೇರಿದೆಯೆಂದು ಹಂದಿಯ ದವಡೆಗೆ ಹಗ್ಗ ಹಾಕಿ ಎಳೆದರೂ ಹಂದಿ ಅಲುಗಾಡಲಿಲ್ಲ. ಆ ಹೊತ್ತಿಗೆ ಚೆನ್ನಯನು ಅಣ್ಣಾ ನಾನು ಎಳೆದು ಕೊಂಡು ಹೋಗುತ್ತೇನೆ. ನೀನು ಪಂಜದವರನ್ನು ನೋಡಿಕೋ ಎಂದವನು ತನ್ನ ನಡುವಿನಲ್ಲಿ ಇದ್ದ ಬೆಳ್ಳಿಯ ನೇವಲವನ್ನು ತಗೆದು ಹಂದಿಯ ದಾಡೆಗೆ ಹಾಕಿ, ಎಳೆದು ಎಣ್ಮೂರು ಪ್ರದೇಶಕ್ಕೆ ಹಾಕಿದನು. ಕೋಟಿಯು ಪಂಜದವರನ್ನು ಹಂದಿಯ ಹತ್ತಿರ ಸುಳಿಯಲು ಬಿಡಲಿಲ್ಲ. ಹಂದಿ ಎಣ್ಮೂರು ಪ್ರದೇಶಕ್ಕೆ ಬಂದ ಒಡನೆಯೇ ಚೆನ್ನಯ ಸುರಿಯ ಹಿಡಿದು ಸಿಂಹನಾದ ಮಾಡಿದಾಗ ಪಂಜದವರು ಧೈರ್ಯವಿಲ್ಲದೆ ಓಡಿ ಹೋದರು. ಚೆನ್ನಯನ ಸುರಿಯಕ್ಕೆ ಯಾರು ಸಿಗಲಿಲ್ಲ ಕಾಡು ನುಗ್ಗಿ ತಪ್ಪಿಸಿಕೊಂಡರು. ಚೆನ್ನಯನ ಕೋಪ ತಣಿಯಲಿಲ್ಲ ಸುರಿಯವನ್ನು ಎತ್ತಿ ಅಲ್ಲೇ ಇದ್ದ ಕಾಸರಕನ ಮರಕ್ಕೆ ತಿವಿದು ಕೋಪ ತಣಿಸಿಕೊಂಡ. ಹಂದಿಯನ್ನು ಮಂಜೋಲು ಪಾದೆಗೆ ಒಯ್ದ ಹಂದಿ ಬಿಡಿಸಿ ಊರಿಗೆಲ್ಲಾ ಹಂಚಲಾಯಿತು.