“ಶ್ರೀ ಕೋಟಿ ಚೆನ್ನಯ ಆದಿಬೈದೇರುಗಳು”

ತುಳುನಾಡ ವೈಭವ

ಸಂಸ್ಕ್ರತಿ ಎನ್ನುವುದು ಬಹಳ ವ್ಯಾಪಕವಾದ ಪರಿಕಲ್ಪನೆ. ಜಾನಪದ ಎನ್ನುವುದು ಸಂಸ್ಕ್ರತಿಯ ಒಂದು ಭಾಗ. ಜಾನಪದ ಭಾವನೆಯು ನಾವು ತಿಳಿದುಕೊಂಡಿರುವ ಜನಪ್ರಿಯ ಸಂಸ್ಕ್ರತಿಯ ಒಂದು ಅಂಶವೇ ಆಗಿದೆ.ತುಳುನಾಡು ದೈವಾರಾಧನೆಯ ಭದ್ರ ನೆಲೆ. ಅತಿಮಾನುಷ ಶಕ್ತಿಗಳನ್ನು ಪೂಜಿಸುವ ಇಲ್ಲಿನ ಮಂದಿ ಮಾಯಕದ ಜಗತ್ತಿನಲ್ಲಿ ಮೈಮರೆತು ನೆಮ್ಮದಿ ಪಡೆಯುತ್ತಾರೆ.

ತುಳುನಾಡಿನ ಅವಳಿ ವೀರರೆಂದೇ ಪ್ರಸಿದ್ಧಿ ಪಡೆದ ಶ್ರೀ ಕೋಟಿ ಚೆನ್ನಯರು ಆರಾಧ್ಯ ಪುರುಷರು. ಕೋಟಿ ಚೆನ್ನಯ ಒಂದು ಪುರಾಣವೂ ಹೌದು, ಚರಿತ್ರೆಯೂ ಹೌದು. ಇದು ಅವಳಿ ವೀರರಿಬ್ಬರ ಲೌಕಿಕ ಮತ್ತು ಅಲೌಕಿಕ ಜಗತ್ತಿನ ಘಟನೆಗಳನ್ನು ನಿರೂಪಿಸುತ್ತದೆ. ಕೋಟಿ ಚೆನ್ನಯರ ಹುಟ್ಟಿಗೆ ಸಂಬಂಧಿಸಿ ಆ ಕತೆಗಳು, ಬೆಳವಣಿಗೆಗೆ ಸಂಬಂಧಿಸಿದ ಕತೆಗಳು, ರೂಪಾಂತರಗಳು, ದೈವಿಕತೆಗೆ ಪಲ್ಲಟ, ಕನಸುಗಳು, ಪವಾಡಗಳು, ಮಾಂತ್ರಿಕತೆ ಹೀಗೆ ಒಂದು ಜನಪದ ಪುರಾಣದ ಎಲ್ಲ ಆಯಾಮಗಳು ಕೋಟಿ ಚೆನ್ನಯದಲ್ಲಿವೆ.

ಕೇವಲ ಕೋಟಿ ಚೆನ್ನಯರು ಪುರಾಣದ ಪಾತ್ರಗಳಾಗಿ ಉಳಿದದ್ದು ಮಾತ್ರವಲ್ಲ, ಕೋಟಿ ಚೆನ್ನಯರ ಕುಲದ್ಯೆವ ಬೆರ್ಮೆರ್ ತುಳು ಜನಪದ ಪುರಾಣದ ಒಂದು ದೈವ. ಪಾಡ್ದನ (ಮಹಾಕಾವ್ಯ), ಬೈದರ್ಕಳ ನೇಮ (ಆರಾಧನೆ), ಗರಡಿ (ಆರಾಧನಾ ಕೇಂದ್ರ) ಗಳ ಮೂಲಕ ಕೋಟಿ ಚೆನ್ನಯ ಪರಿಕಲ್ಪನೆ ತುಳು ಜನಪದ ಮನಸ್ಸುಗಳಲ್ಲಿ ಅತ್ಯಂತ ಗಾಢವಾಗಿ ನೆಲೆನಿಂತಿರುವ ಸಾಂಸ್ಕ್ರತಿಕ ಅಂಶವಾಗಿದೆ.ಕೋಟಿ ಚೆನ್ನಯ ಶ್ರೀಮಂತವಾದ ತುಳು ಸಂಸ್ಕ್ರತಿಯ ಒಂದು ಭಾಗ ಮತ್ತು ಅಧ್ಯಯನಕ್ಕೆ ಅತ್ಯುತ್ತಮ ಆಕರ ಕೂಡ.

ಹೀಗೆ ಈ ಎಲ್ಲಾ ಅಂಶಗಳು ಸಮ್ಮಿಳಿತಗೂಂಡ ಕೋಟಿ ಚೆನ್ನಯ ತುಳುವರ ಪಾಲಿಗೆ ಹೆಚ್ಚು ಆಪ್ತವಾಗಿರುವುದು. ಈ ಅವಳಿ ವೀರರು ನಮ್ಮ ನೆಲದಲ್ಲಿ ಓಡಾಡಿದವರೆಂಬ ಕಾರಣಕ್ಕೆ, ಎಣ್ಮೂರುನಲ್ಲಿ ಕೋಟಿ ಚೆನ್ನಯ ಸಮಾಧಿ ಹೊಂದಿದ ಸ್ಥಳದಲ್ಲಿರುವ ಎಣ್ಮೂರು ಗರಡಿ ಚಾರಿತ್ರಿಕ ಪ್ರಸಿದ್ಧಿ ಹೊಂದಿರುವ ತಾಣ. ಇಲ್ಲಿ ನಡೆಯುವ ನೇಮೋತ್ಸವಕ್ಕೆ ದೂರ ದೂರಗಳಿಂದ ಸಾವಿರಾರು ಜನರು ಅಗಮಿಸುತ್ತಾರೆ.

ಹೀಗೆ ತುಳುವರ, ಕೋಟಿ ಚೆನ್ನಯ ತುಳುನಾಡ ವೈಭವದ ಈ ಪುಣ್ಯ ಮತ್ತು ಚಾರಿತ್ರಿಕ ಸ್ಥಳಗಳ ಸಂಗತಿಗಳನ್ನು ವಿಶ್ವದಾಖಲಾಗಬೇಕೆಂಬ ನಿಟ್ಟಿನಲ್ಲಿ ನನ್ನ ತಂದೆ ತಾಯಿ ಹಾಗೂ ಗುರು ಹಿರಿಯರ ಆಶ್ರೀರ್ವಾದಗಳೊಂದಿಗೆ ಈ ವಿಶೇಷ ವೆಬ್ ಸೈಟ್ ನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ

 

 

 

 

 

ರವಿ ಎಸ್.
ಸಿಸ್-ಟೆಕ್ ಸೆಲ್ಯುಶನ್ಸ್
ಹಿರಿಯಡಕ- ಉಡುಪಿ